Budget 2024: ನಮಸ್ಕಾರ ಕರ್ನಾಟಕ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಮೂರನೇ ಅವಧಿಗಾಗಿ ಅಧಿಕಾರದಲ್ಲಿದ್ದು, 2024-25ನೇ ಸಾಲಿನ ಬಜೆಟ್ ಮಂಡನೆ ಹೊಣೆಗಾರಿಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಇದೆ. ಈ ಮೂಲಕ ಸತತ ಏಳನೇ ಬಾರಿ ಬಜೆಟ್ ಮಂಡನೆ ಮಾಡುವ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಿದ್ದಾರೆ.
ಈ ಬಜೆಟ್ ಕುರಿತು ಸಾಮಾನ್ಯ ಪ್ರಜೆಗೆ ಅನೇಕ ನಿರೀಕ್ಷೆಗಳಿದ್ದು, ಮುಖ್ಯವಾಗಿ ಎಲೆಕ್ಟ್ರಿಕ್ ವಾಹನೋದ್ಯಮದ ಪ್ರೋತ್ಸಾಹದ ಮೇಲಿವೆ. 2030ರ ವೇಳೆಗೆ ಒಟ್ಟು ವಾಹನ ಮಾರಾಟದಲ್ಲಿ ಶೇಕಡ 30ರಷ್ಟು ವಿದ್ಯುತ್ ಚಾಲಿತ ವಾಹನಗಳನ್ನು ಸಾಧಿಸುವ ಗುರಿ ಹೊಂದಿರುವ ಮೋದಿ ಸರ್ಕಾರ, ಈ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಹೆಚ್ಚಿನ ಬಲ ನೀಡುವ ಸಾಧ್ಯತೆಯಿದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸಲು, ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಫೇಮ್) ಯೋಜನೆಯನ್ನು ಈಗಾಗಲೇ ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಮೂರನೇ ಹಂತದ ಯೋಜನೆಗಾಗಿ ರೂ.10,000 ಕೋಟಿ ಅನುದಾನ ಮೀಸಲಿರಿಸಬಹುದೆಂದು ಚರ್ಚೆ ನಡೆಯುತ್ತಿದೆ.
ಫೇಮ್-3 ಯೋಜನೆಗೆ ಸಂಬಂಧಿಸಿದಂತೆ ಭಾರೀ ಕೈಗಾರಿಕೆ ಸಚಿವಾಲಯವು ಪ್ರಧಾನ ಮಂತ್ರಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸು ಸಚಿವೆ ಬಜೆಟ್‌ನಲ್ಲಿ ಈ ಯೋಜನೆಯ ಬಗ್ಗೆ ಮಹತ್ವದ ಘೋಷಣೆ ಮಾಡುವ ನಿರೀಕ್ಷೆಯಿದೆ.
ಅಷ್ಟೇ ಅಲ್ಲದೆ, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಹಸಿರು ಚಲನಶೀಲತೆಯನ್ನು ಉತ್ತೇಜಿಸಲು ಫೇಮ್-3 ಯೋಜನೆ ಶೀಘ್ರದಲ್ಲಿಯೇ ಘೋಷಿಸಲಾಗುವುದೆಂದಿದ್ದಾರೆ. ಆದರೆ, ಈ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಫೇಮ್-1 ಸಬ್ಸಿಡಿ ಯೋಜನೆಯನ್ನು ಏಪ್ರಿಲ್ 1, 2015ರಂದು ರೂ.895 ಕೋಟಿ ಅನುದಾನದೊಂದಿಗೆ 5 ವರ್ಷಗಳ ಅವಧಿಗೆ ಜಾರಿಗೊಳಿಸಿತ್ತು. ಇದಾದ ನಂತರ ಫೇಮ್-2 ಯೋಜನೆಯನ್ನು ರೂ.10,000 ಕೋಟಿಯ ಅನುದಾನದೊಂದಿಗೆ ಏಪ್ರಿಲ್ 1, 2019ರಿಂದ ಮಾರ್ಚ್ 31, 2024ರವರೆಗೆ ಜಾರಿಗೊಳಿಸಿತ್ತು.
ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ ಪ್ರಕಾರ, 2024ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳ ಮಾರಾಟ ಶೇಕಡ 91ರಷ್ಟು (90,996 ಯುನಿಟ್) ಹೆಚ್ಚಾಗಿದೆ. ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮಾರಾಟವು ಮೂರು ಪಟ್ಟು ಹೆಚ್ಚಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮವನ್ನು ಉತ್ತೇಜಿಸಲು ಬ್ಯಾಟರಿ ತಯಾರಿಕೆ, ಫೇಮ್-3 ಯೋಜನೆ ಜಾರಿ ಮತ್ತು ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಅನುದಾನವನ್ನು ಮೀಸಲಿಡಬೇಕಾಗಿದೆ. ಇದರಿಂದ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಖರೀದಿ ಪ್ರಮಾಣವು ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತಿದ್ದು, ನೀವು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡುವ ಮೂಲಕ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿ ಮತ್ತು ವೀಡಿಯೊಗಳನ್ನು ಪಡೆಯಬಹುದು.