ನಮಸ್ಕಾರ ಕರ್ನಾಟಕ,ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ನಿರೀಕ್ಷಿಸುತ್ತಿರುವ ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಂತೋಷದ ಸುದ್ದಿ ನೀಡಿದ್ದು, ಆಗಸ್ಟ್ ಮೊದಲ ವಾರದಲ್ಲಿ ಜೂನ್, ಜುಲೈ ತಿಂಗಳ ಹಣವನ್ನು ಒಟ್ಟಿಗೆ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದೆ.
ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿರಲಿಲ್ಲ.
ಈಗ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯವು ಅಂತಿಮ ಹಂತಕ್ಕೆ ತಲುಪಿದ್ದು, ಅಗಸ್ಟ್ ಮೊದಲ ವಾರದಲ್ಲಿ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುತ್ತದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಮೂರ್ನಾಲ್ಕು ತಿಂಗಳಿನಿಂದ ತಲುಪಿಲ್ಲ ಎಂಬುದು ತಪ್ಪಾಗಿದೆ. ಮೇ ತಿಂಗಳಲ್ಲಿ ಹಣವನ್ನು ಜಮಾ ಮಾಡಲಾಗಿತ್ತು. ಜೂನ್, ಜುಲೈ ತಿಂಗಳ ಹಣಕ್ಕೆ ತಾಂತ್ರಿಕ ತೊಂದರೆಗಳು ಉಂಟಾಗಿದ್ದರೂ, ಈಗ ಡಿಬಿಟಿ ಪುಶ್ ಮೂಲಕ ಈ ಸಮಸ್ಯೆ ನಿವಾರಣೆ ಮಾಡಲಾಗುತ್ತಿದೆ. ಮುಂದಿನ 8-10 ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಮಾಡಲಾಗುತ್ತದೆ.
ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ನೀಡಲಾಗಿದ್ದು, ಚುನಾವಣಾ ಪ್ರಚಾರದ ವೇಳೆ ಈ ಭರವಸೆ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.